Posts

ಪರೀಕ್ಷಾರ್ಥಿಗಳು

  ಪರೀಕ್ಷಾರ್ಥಿಗಳ ದಂಡಯಾತ್ರೆ ಸಾಗುತ್ತಲೇ ಇದೆ ಋತು ಚಕ್ರದ ಹಾಗೆ.. ಈ ದಿವಸ ಮಾಸ.. ಬರೋ ವರುಷ ಹೀಗೆ ಉರುಳುವ ಕಾಲ ಪ್ರಶ್ನೆಗಳೊಂದಿಗೆ ಉತ್ತರ ಅರಸುತ್ತ ಈಜಿಗೆ ಬಿದ್ದ ಹಾಗೆ! ಹರಿವ ನೀರಿನಾಳ ಮಬ್ಬು ಕತ್ತಲ ಒಳ ಹಾಯ್ದು ತಡಕಿ ಮೇಲೆ ಮೇಲೆ ದಾಟಿ ಒಳಸುಳಿಗಳೊಳಗೆ ಸುದೀರ್ಘ ಏಕಾಂತ ಕಳೆಯುವಂತೆ ಚಿತ್ತಾದ ಉತ್ತರಗಳ ನಡುವೆ ಅಬ್ಬೇಪಾರಿ ಒಂದೆಳೆ ನೆನೆಪು ಮಾಸಿ ಎರಡು ಸುತ್ತು ತೆಳ್ಳಗಾಗಿ ಕಳೆಗಟ್ಟಲು ಪರೀಕ್ಷೆ ತೀರಲೇ ಬೇಕು. ಉತ್ತರಗಳೇ ಕಾಣದ ಹಲವು ಒಗಟುಗಳಿಗೆ ಮುಗ್ಗರಿಸಿ ಪರೀಕ್ಷೆಯೇ ಬ್ರಹ್ಮಾಂಡದ ಕೇಂದ್ರವೆ ಆದಂತೆ ಮೆರೆಸಿದರೂ ಯಾವ ಪರೀಕ್ಷೆಗೂ ಕಾಯದೆ ಗಂಟು ಮೂಟೆ ಬಿಟ್ಟು ಹೊರಡುವ ತುರ್ತು ನಿರ್ಗಮನದ ಯಕ್ಷಪ್ರಶ್ನೆಗೆ ಮರೆತಂತೆ ಇದ್ದುಬಿಡುವ ಮರುಳಷ್ಟೇ.. ಧರ್ಮರಾಯನ ಉತ್ತರ. - ವನಿತಾ ಪಿ ವಿಶ್ವನಾಥ್ 

ಚಿನ್ನದ ಬಾತುಕೋಳಿ

ಮೋಟು ಲಂಗ ಉದ್ದಜಡೆ ಆಕಾಶಕ್ಕೆ ಅಂಬು ಹಾಸಿದ ಏಳುಸುತ್ತಿನ ಮಲ್ಲಿಗೆ ಕೈಗೆಟುಕು.. ಎಟುಕು ಕುಣಿದಾಗೆಲ್ಲಾ! ಬಾಯ್ತುಂಬ ನಕ್ಕಳು ಅಜ್ಜಿ ಅವಳ ಎಲೆ ಅಡಿಕೆ ಚೀಲಕ್ಕೆ ಹೊಲಿಯಲಾರದ ತೂತು ಮುಗ್ಗಲು. ಪುಟ್ಟ ಬಾಲೆಯ ಪುಸ್ತಕದ ಬ್ಯಾಗಿನ ತಳದ ಚಿಲ್ಲರೆ ಕ್ಯಾಂಡಿ ಚಾಕಲೇಟು ನಿಂಬೆ ಹುಳಿ ಖಾಲಿ ಖಾಲಿ. ತಿಂಗಳು, ಬೇಗ ಮುಗಿಯದ ಜುಲುಮೆ. ಅಪ್ಪಕೊಟ್ಟ ದೊಡ್ಡ ನೋಟು ನವಿಲು ಗರಿಗಳ ನಡುವೆ ದಶಕಗಳೇ ಕಳೆದ ನೆನಪು! ಹಳೇ ಆಲ್ಬಮ್ನ ಪುಟತಿರುವಿದಾಗೆಲ್ಲಾ ಅರೆ ಸಂಕೋಚದ ಮುದ್ದೆ ಅಮ್ಮ. ಅವಳ ಟ್ರಂಕಿನಲ್ಲಿ ಮಡಿಕೆಯ ನಡುವಿನ ಬಾತುಕೋಳಿಯ ಓಲೆ ಮಾಯವಾದ್ದು ಈಕೆ ಬಿಡಿಸೇ ಇರದ ಒಗಟು! ಒಗಟು ಅಂದಾಗೆಲ್ಲಾ ಅಜ್ಜಿ ಕತೆ ಸುರುವಿಡುತ್ತಾಳೆ.. ಏಳು ಸಾಗರದಾಚೆ.. ಕಾಡು ದಾಟಿ, ಮಾಮರದ ನಡುವೊಬ್ಬಳು ಕನವರಿಕೆಯಾಕೆ. ಅಜ್ಜಿ, ಅಮ್ಮ, ಅತ್ತೆಯರು ಸರದಿಯಲ್ಲಿ ಹೊತ್ತು ದಾಟಿಸಿದ ಸರಗಳು ತೊನೆದು ಕುತ್ತಿಗೆ ಭಾರದ ಕಿಸೆ ಇಲ್ಲದ ರಾಜಕುಮಾರಿ! ಈಕೆಗೆ ಪ್ರಾಯವೆಂದರೆ ಕೇಳಬೇಕೆ? ಪರಧಾರೆಯ ಗೌಜು ಗದ್ದಲ.. ಈಗಲು ಅದು ಸುದೀರ್ಘದೆ ಕಳೆದು ಹೊಗುವ ಕನಸ್ಸು... ಹಂಗಿನ ಪ್ರಯಾಣ! ಮೌನದ ತೊಡಿಗೆಯ ಬಾಲೆ ಮನೆಯಿಂದ ಮನೆಹೊಕ್ಕು ಗುಸುಗುಡುವ ಕತೆಯಾಗುತ್ತಾಳೆ. ಹೂಗಣ್ಣು ತಿಳಿವ ಸುರುವಿಕೊಂಡಲ್ಲಿ ಅವನ ತೋಳಾದರು ಕಿಸೆಯ ಅಂತರ್ಪಟ ಹಾರಾಡುತ್ತದೆ. ಮಣಿಯದ ಬದುಕು... ಕಿಸೆಗಳು ಮೂಡಹತ್ತುತ್ತವೆ ಬ್ಯಾಗಿಗೆ. ಹರವಿಕೊಂಡ ಆಕಾಶ ಅಗಣಿತ ತಾರೆ ಜತನ ಮಾಡಿದ ಬ

ಬೆಳಕು

ಕವನ: ಬೆಳಕು ಬೆಳಗುತಿದೆ ಹೊಳೆಯುತಿದೆ ಹಿರಿದಾಗಿ ಕಿರಿದಾಗಿ ಕಣ್ಣ ಕೋರೈಸುವ ವಿಶ್ವರೂಪ. ಗತ ಶತಮಾನಗಳ ಬಾಗಿನ ಹಿಂದು ಮುಂದಾದರೂ ನನಗೆ ದಕ್ಕಿದ್ದು ನನಗೆ. ಜೀವಧಾತುಗಳು ಗುರುತು ಸಿಕ್ಕದೆ ಹೋಗಿ ಪ್ರಶ್ನೆಗಳ ಸುಳಿಗಾಳಿ. ಬೆಳಕಿನರಮನೆಯಲ್ಲಿ ತಳವಿರದ ಕತ್ತಲಲ್ಲಿ ತೂಗಾಡುವ ಸವಾಲು. ಹೀರುತ್ತಿದೆ ಮುಗಿಯುತ್ತಿದೆ ಕರಕಲಾಗಿ ಬೀಳುತ್ತಿದೆ ಬೆಳಕಿನ ಬೂದಿ. ಬಂಗಾರದ ಅಂಗಳದಲ್ಲಿ ಮಿಸುಕಾಡದ ಬಂಜೆ ದಂಡಾಧಿಪತಿ ನಾನು. - ವನಿತಾ ಪಿ ವಿಶ್ವನಾಥ್

ರೆಕ್ಕೆ

ಎತ್ತ ತಿರುಗಿದ್ದೆನೋ ಆಗ ಜೊತೆಗಿದ್ದವುಗಳು ಕಳಚಿ ಹಾರುವಾಗ. ಉದುರಿಹ ರಂಗುರಂಗಿ‌ನ ಗರಿ ಪುಕ್ಕಗಳು ತೂರಿವೆ ಬಿಸುಗಾಳಿಗೆ. ಚೀರುತಿವೆ ಎಲ್ಲೋ ಗುಂಪಾಗಿ ಹೆಕ್ಕಿ ಹೆಕ್ಕಿ ಮೇವ ಪಾಚಿಕಟ್ಟಿದ್ದ ನೀರ ಕಲಕಿ ಕೊಕ್ಕಿಟ್ಟು ಹೀರಿ ಕೆನೆದು ಬೆಚ್ಚಗಿದ್ದವೋ ತೆಕ್ಕೆಯಲ್ಲಿ. ಪಳಗಿಸಲೇ ಇಲ್ಲ ಮತ್ತೆ ಬರುವುದಿತ್ತ. ಕತ್ತೆತ್ತಿ ನೆಲ ಮರೆತು ಸಾಗಿತೋ ದೂರ ದೂರಕೆ ಹೆಜ್ಜೆ ತಲುಪಿದ್ದೆ ಅರಿಯುವುದರೊಳಗೆ ಬೂದಿ ರಾಶಿಯ ಬದಿ. ಗಬೆಯು ಬಡಿಯುತಿದೆ ಒಳಗಿಂದ ಆರಿಲ್ಲ ತೀರದ ಕಾವು. ಎಂದೋ ದೇಹಿ ದೇಹಿ ಎಂದ ದಾಹಗಳು ಬಾಯ್ತೆರೆದು ಬರಿದಾಗಿವೆ ಮತ್ತೆ ಇತ್ತಣಿಂದೆತ್ತ ಪರಿಪರಿಯ ಪರದಾಟ. ಬಲಿತದೆಂದೋ ಅವು ರೆಕ್ಕೆ ಬಡಿವಾಗ ಸದ್ದು ಕೇಳಲೆ ಇಲ್ಲ ಹಾರಿರಬಹುದು ಈ ಊರ ದಾಟಿ ಅತ್ತ ಅತ್ತ.... ದೂರದತ್ತ. - ವನಿತಾ ಪಿ ವಿಶ್ವನಾಥ್

ಹೆಜ್ಜೆಗಳ ಸಾಲು

ನೆನಪಿನ ಸುರುಳಿಯಲ್ಲಿ ಅನಂತ ಭಾವಗಳ ಒಕ್ಕೊರಲು ಕಡಲ ತಡಿಗೆ ಇಳಿದರೆ. ಹಂಗಿರದ ಆಕಾಶನೀಲಿ ಹಂಬಲಿಸುವ ಹಗಲ ಕಡಲು... ಅಲೆ ಉಬ್ಬರದ ತಡಿಯಲ್ಲಿ ಮರೆತು ಕುಳಿತಾಗೊಮ್ಮೆ ದಡದ ಮರಳು ಇಳಿದು ಕಡಲ ತೆರೆಯ ಉಕ್ಕಿಗೆ ಕಡಲು ಒಡಲು ಅಭೇದದ ದಡ. ಆ ಮೋಡಕ್ಕೂ ಒಮ್ಮೆ ಭ್ರಾಂತು ಹಿಡಿದಂತೆ ಕಡಲ ಎದೆಗೆ ಮಳೆಗರೆಯುತ್ತದೆ...! ಒಳಗಡಲ ಹರವು ಮನದ ಚಿಪ್ಪಗೆ ಇಳಿವ ಕಸುವು. ಕಡಲ ಪ್ರೀತಿಸಲಾದೀತೆ? ಎಷ್ಟೋ ಹೆಜ್ಜೆಗಳ ಸಾಲು ಮಳಲ ದಂಡೆಯಲಿ ಬಿಟ್ಟು ಬಂದ ವಿರಹಿಗಳು.... https://avadhimag.com/?p=227635

ಕುತೂಹಲಿಗರು

ನೆವಗಳಿಂದ ನೆವಗಳಿಗೆ ದಾಟಿಕೊಳ್ಳುವುದು ಹೊಸತಲ್ಲವಲ್ಲ....! ಆ ತುಂಟ ಬಾಲ್ಯ ಕಸಿದದ್ದೋ ಗಳಿಸಿದ್ದೋ ಬೆನ್ನ ಹಿಂದೆ ಮುಷ್ಠಿಯಲ್ಲಿ ಮರೆಮಾಡಿ ಎದುರಿಗಿರುವ ಆ ಕಣ್ಣುಗಳೊಳಗೆ ಅಳುವನ್ನೋ,ಕುತೂಹಲವನ್ನೋ,ಕಕ್ಕುಲತೆಯನ್ನೋ ಧುಮ್ಮಿಕ್ಕಲೆಂದು ರಚ್ಚೆ ಹಿಡಿದ ಆಟಗಳು... ನಾವೂ ಕುತೂಹಲಿಗರಾಗೋಣ? ನೀನು ಮರೆಸಿದ,ನಾನು ಅರಸಿದ, ಚೇಷ್ಟೆಗಳ ಬಿಂಕ ಸಾಕೆನಿಸೋದುಂಟೆ. ಅರಿತಂತೆ ಬಹುಮಾನಿಸುವ ಮನೋರಮೆ, ಛೇಡಿಸುವ ಮುದ್ದಣ್ಣ ಹವಣಿಕೆಯ ಕಣ್ಣುಗಳು...! ಶಾಲೆಯಲ್ಲಿ ಕಟ್ಟುತ್ತಿದ್ದ ರಿಬ್ಬನಿನ ಜಡೆ ಈಗ ಒಗ್ಗದಿದ್ದರು ಕಟ್ಟುಗಳಿಗೆ ಒಗ್ಗಿದ ಬಿಕ್ಕಟ್ಟುಗಳು ಬಣ್ಣಗೆಡಿಸುವ ದಾಳಗಳು ಚೌಕದೊಳು ಉರುಳಿದಾಗೆಲ್ಲ ಅವರ ಕಾಯೇ ಹಣ್ಣು.. ಊಟದ ಆಟದ ಹುಂಬಣ್ಣ...  ನಿನಗೊಂದಷ್ಟು ಪಾಲು ಅವಲಕ್ಕಿ ಸಕ್ಕರೆ. ನಾಳಿನಾಟದ ನೆವ. ನೆವ ಅಹಂಮ್ಮಿಕೆಯ ಬೆಂಕಿಯುಗುಳಲಲ್ಲ ಹಮ್ಮು ಬಿಮ್ಮುಗಳ ಹೊರೆಕಟ್ಟಲಲ್ಲ ಕಳೆಯುವ ಕಾಲದ ಮತ್ತು... ತಿಟ್ಟತ್ತಿ ತಿರುಗಿ ನೋಡುವ ಕುರುಳು ಕರುಳತೀಡಿ ದಾಟಿಕೊಂಬ ಮಾಂತ್ರಿಕ ಮೌನದ ಗಾಳಿ... - ವನಿತಾ ಪಿ ವಿಶ್ವನಾಥ್ (ಕೆಂಡಸಂಪಿಗೆಯಲ್ಲಿ ಪ್ರಕಟಗೊಂಡ ಕವನ)

ಬೋಧನೆ ಮತ್ತು ಕಲಿಕೆ

ಸಶರೀರ ಅಕ್ಷರಗಳು ಅಪರಾತ್ರಿಯಲಿ ಆರೋಪಿತ ಅರ್ಥಗಳ ಹೊತ್ತು ಬೋಧನೆ ಮಾಡುತ್ತವೆ. ನಾನಾದರೋ ತರ್ಕಾತೀತ  ಬಾನಗಡಿಯ ಹಾಗೊಂದು  ಮೌನದ ನಿದ್ದೆಯ ಕಲಿಯುತ್ತಿದ್ದೇನೆ! - ವನಿತಾ ಪಿ ವಿಶ್ವನಾಥ್