ಕುತೂಹಲಿಗರು



ನೆವಗಳಿಂದ ನೆವಗಳಿಗೆ ದಾಟಿಕೊಳ್ಳುವುದು ಹೊಸತಲ್ಲವಲ್ಲ....!

ಆ ತುಂಟ ಬಾಲ್ಯ
ಕಸಿದದ್ದೋ ಗಳಿಸಿದ್ದೋ
ಬೆನ್ನ ಹಿಂದೆ ಮುಷ್ಠಿಯಲ್ಲಿ ಮರೆಮಾಡಿ
ಎದುರಿಗಿರುವ ಆ ಕಣ್ಣುಗಳೊಳಗೆ
ಅಳುವನ್ನೋ,ಕುತೂಹಲವನ್ನೋ,ಕಕ್ಕುಲತೆಯನ್ನೋ ಧುಮ್ಮಿಕ್ಕಲೆಂದು
ರಚ್ಚೆ ಹಿಡಿದ ಆಟಗಳು...

ನಾವೂ ಕುತೂಹಲಿಗರಾಗೋಣ?
ನೀನು ಮರೆಸಿದ,ನಾನು ಅರಸಿದ,
ಚೇಷ್ಟೆಗಳ ಬಿಂಕ ಸಾಕೆನಿಸೋದುಂಟೆ.

ಅರಿತಂತೆ ಬಹುಮಾನಿಸುವ ಮನೋರಮೆ,
ಛೇಡಿಸುವ ಮುದ್ದಣ್ಣ
ಹವಣಿಕೆಯ ಕಣ್ಣುಗಳು...!

ಶಾಲೆಯಲ್ಲಿ ಕಟ್ಟುತ್ತಿದ್ದ ರಿಬ್ಬನಿನ ಜಡೆ
ಈಗ ಒಗ್ಗದಿದ್ದರು
ಕಟ್ಟುಗಳಿಗೆ ಒಗ್ಗಿದ ಬಿಕ್ಕಟ್ಟುಗಳು

ಬಣ್ಣಗೆಡಿಸುವ ದಾಳಗಳು
ಚೌಕದೊಳು ಉರುಳಿದಾಗೆಲ್ಲ
ಅವರ ಕಾಯೇ ಹಣ್ಣು..

ಊಟದ ಆಟದ ಹುಂಬಣ್ಣ... 
ನಿನಗೊಂದಷ್ಟು ಪಾಲು
ಅವಲಕ್ಕಿ ಸಕ್ಕರೆ.
ನಾಳಿನಾಟದ ನೆವ.

ನೆವ ಅಹಂಮ್ಮಿಕೆಯ ಬೆಂಕಿಯುಗುಳಲಲ್ಲ
ಹಮ್ಮು ಬಿಮ್ಮುಗಳ ಹೊರೆಕಟ್ಟಲಲ್ಲ
ಕಳೆಯುವ ಕಾಲದ ಮತ್ತು...

ತಿಟ್ಟತ್ತಿ ತಿರುಗಿ ನೋಡುವ
ಕುರುಳು ಕರುಳತೀಡಿ ದಾಟಿಕೊಂಬ
ಮಾಂತ್ರಿಕ ಮೌನದ ಗಾಳಿ...

- ವನಿತಾ ಪಿ ವಿಶ್ವನಾಥ್

(ಕೆಂಡಸಂಪಿಗೆಯಲ್ಲಿ ಪ್ರಕಟಗೊಂಡ ಕವನ)

Comments

Popular posts from this blog

ಪರೀಕ್ಷಾರ್ಥಿಗಳು

ರೆಕ್ಕೆ